ವಾಸ್ತವ ..ಇರುವುದೆಲ್ಲವ ಬಿಟ್ಟು ..

        

image

        ಗಡಿಯಾರ ನೋಡಿದಾಗ ಸಮಯ 11.35pm. ಅರೇ! ಇಷ್ಟು ಬೇಗ ಸಮಯ ಆಗೋಯ್ತಾ. ಇನ್ನು 25 ನಿಮಿಷಕ್ಕೆ ಮೇಲಿಂದ ಮೇಲೆ ಫೋನ್ ಕರೆಗಳು, ಮೆಸೇಜ್ಗಳು ಬರುತ್ವೆ.
ಹೌದು, ಈ ಪ್ರಪಂಚದ ಒಂದು ಕಣ ತಾನು ಹುಟ್ಟಿ 23 ವರ್ಷಗಳಾದ ಸಂಭ್ರಮವನ್ನ ಪಡೆಯುತ್ತೆ. ಈ ಅಗಾಧ ಪ್ರಪಂಚಕ್ಕೆ ಹೋಲಿಸಿದರೆ, ‘ನಾನು’ ಎಂಬ ಪುಟ್ಟ ದೇಹ, ಈ 23 ವರ್ಷಗಳು ಕರಡಿಯ ಮೈ ಮೇಲಿನ ಒಂದು ರೋಮದಂತೆ. ಆದರೆ ಅದೂ ಕೂಡ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುತ್ತದೆ. ಕರಡಿಯ ದೇಹದ ಒಂದು ಅಂಗವೆಂಬ ವಾಸ್ತವವೂ ಅದಕ್ಕೆ ತಿಳಿದಲಾರದು. ಆದರೂ ಅದಕ್ಕೊಂದು ಅಸ್ಥಿತ್ವವಿದೆ.
ಅರೇ! ನಾನ್ಯಾಕೆ ಪ್ರತಿವರ್ಷ ಹುಟ್ಟಿದ ದಿನದ ಮೊದಲು ಈ ತರಹ ವಿಚಿತ್ರವಾಗಿ ಯೋಚಿಸೋದು. ಕಳೆದ ವರ್ಷವೂ ಆದೇ ರೀತಿ ಆಗಿತ್ತಲ್ವಾ. ಶ್ವೇತಾಳ ಕರೆ ಬಂದಾಗ ಸೌರಭ್ ಯಾಕೆ ವಿಶ್ ಮಾಡಿಲ್ಲ ಅನ್ನೋ ತಳಮಳ, ಅವನ ಮೆಸೇಜ್ ಬಂದಾಗ, ಸುರಭಿಯ ನೆನಪು.
ಒಟ್ಟಿನಲ್ಲಿ ಇರೋದರ ಬಗ್ಗೆ ಯೋಚಿಸದೆ, ಮುಂದಿನ ಭವಿಷ್ಯದ ಬಗೆಗೋ, ಹಿಂದೆ ಆಗಿ ಹೋದ ವಿಷಯಾನೋ ಚಿಂತಿಸೋದೇ ಈ ಮೆದುಳಿಗಿರೋ ಗೀಳು. ಒಟ್ಟಾರೆ ಇರೋದು ಬೇಡ, ಇಲ್ದೇ ಇರೋದು ಸಿಗೋದಿಲ್ಲ.

ಗಂಟೆ 12 ಹೊಡೀತು ಕೊನೆಗೂ ಕಾದು ಕಾದು. ಮೇಲಿಂದ ಮೇಲೆ ಫೋನ್ ಕರೆಗಳು, ಮೆಸೇಜ್ಗಳು ಎಲ್ಲಾ ಬಂದು ಒಂದೂವರೆ ಗಂಟೆವರೆಗೂ ಅನುಷಾಗೆ ನಿದ್ದೇನೆ ಇಲ್ಲ. ಅವಳಿಗದು ಪ್ರತಿ ವರ್ಷದ ಅನುಭವ. ಪ್ರತಿ ವರ್ಷ ನವೆಂಬರ್ 4ರಂದು ಅವಳಿಗೆ ನಿದ್ದೇನೆ ಇಲ್ಲ.
“ಎದ್ದೇಳಿ ಅಕ್ಕಾ, ರೂಮ್ ಸಾರಿಸ್ಬೇಕು. 5 ನಿಮಿಷ ಹೊರಗಡೆ ಇರ್ತೀರಾ” ಎಂಬ ಮಾತಿಗೆ ಎಚ್ಚೆತ್ತು ನನ್ನೀ ಯೋಚನಾ ಲಹರಿಯಿಂದ ಹೊರಬಂದು, ಕೋಣೆಯಿಂದಲೂ ಹೊರ ಬಂದೆ. ತಟ್ಟೆ ತಗೊಂಡು ತಿಂಡಿಗೆ ಹೋಗಿ ಗೆಳತಿಯರ ಜೊತೆ ಮಾತಾಡ್ತಾ, ಶುಭಾಷಯಗಳನ್ನು ಹೇಳಿಸಿಕೊಂಡು, ಖುಷಿಯಿಂದ ರೂಮಿಗೆ ಬಂದೆ. ಅಲ್ಲಿ ಕೆಲಸದಾಕೆ ಯಾವುದೋ ಪೊಟ್ಟಣ ಹಿಡಿದು ” ಅಕ್ಕಾ ಮಂಚದ ಕೆಳಗಿತ್ತು” ಅಂತ ಕೊಟ್ಟು ಹೋದಳು.
ಅದರಲ್ಲಿ ಅನುಷಾಗೆ ಅಂತ ಬರೆದಿತ್ತು. ಕೆಳಗಡೆ ‘ವಿದುಷಿ’ಯಿಂದ 4/11/2012 ಅಂತ ಇತ್ತು. ಅಯ್ಯೋ! ಕಳೆದ ವರ್ಷದ ಉಡುಗೊರೆ, ಈ ವರ್ಷ ಹುಟ್ಟಿದ ದಿನಾನೆ ಸಿಕ್ಕಿತು. ಧೂಳು ಹಿಡಿದಿದ್ದ ಹಳೇ ಟ್ರಂಕನ್ನು ಮನೆಯಿಂದ ಗಲಾಟೆ ಮಾಡಿ ತಂದಿದ್ದೆ. ಬಹುಷ ಅದರಲ್ಲೇ ಇತ್ತು ಈಗ ಸಿಕ್ಕಿತು ಅಂತ ಖುಷಿಯಿಂದ ತೆರೆದೆ. ಅರೆ! ಒಂದು ಪತ್ರ ಅಂತ ತೆರೆದು ಓದಿದೆ. ” ಸಾರಿ ಕಣೆ ಅನು ನಿನಗೆ ಉಡುಗೊರೆ ಕೊಡೋ ಮನಸ್ಸೇ ಆಗ್ಲಿಲ್ಲ. ಅದರೆ ಈ ಸಾರಿ ನೀನು ಎಪ್ರಿಲ್ ಒಂದರಂದು ಫೂಲ್ ಆಗ್ಲೇ ಇಲ್ಲ. ಅದಕ್ಕೇ ಅದನ್ನ ಇವತ್ತು ತೀರಿಸಿಕೊಂಡೆ. ಆದ್ರೂ ಈ ಪೊಟ್ಟಣ ತೆರೆಯೋ ಮೊದಲು ನಿಂಗೆ ಒಂದು ನಿರೀಕ್ಷೆ ಇತ್ತಲ್ವಾ. ಆಸೆ ಇತ್ತೂ ತಾನೆ. ಮತ್ತೆ ಇದು ಕಳೆದ ವರ್ಷದ ಉಡುಗೊರೆ ಅಂತ ನಂಬಿದೆ ಅಲ್ವಾ. ಅನೂ ಅದೇ ಕಣೆ, ನಿರೀಕ್ಷೆಗಳಲ್ಲೇ ನಮ್ಮ ಜೀವನ. ನಿರೀಕ್ಷೆ ಬೇಕು ಜೀವನದಲ್ಲಿ, ಅದನ್ನ ಈಡೇರಿಸೋ ಪ್ರಯತ್ನ ಕೂಡ ಇರಲಿ. ಆದರೆ ವಾಸ್ತವವನ್ನ ಒಪ್ಪಿ ಗೌರವಿಸಲೇಬೇಕು. ಒಳಿತಾಗಲಿ, ಹುಟ್ಟು ಹಬ್ಬದ ಶುಭಾಷಯಗಳು. ನನ್ನ ವಿಶೇಷ ಉಡುಗೊರೆ ನಿರಾಸೆ, ಕೋಪ, ಖುಷಿ, ಸಮಾಧಾನ ಕೊಡ್ತು ನಿಂಗೆ ಅನ್ಕೋತೀನಿ. ಆದ್ರೆ ಅದೇ ವಾಸ್ತವ ಜೀವನ ಅಲ್ವಾ” ಅಂತ ಮುಗೀತು ಪತ್ರ.
ಉಫ್, ಹೀಗೆ ವಿಚಿತ್ರವಾಗಿ ಆಡ್ತಾಳೆ ಈ ವಿದೂ ಪ್ರತಿ ಸಲಾನೂ. ಸರಿ, ಇರಲಿ ಇವತ್ತು ಇವಳೂ ಹುಟ್ಟಿದಾಳಲ್ಲಪ್ಪ. ನೋಡ್ಕೋತೀನಿ ಇವಳನ್ನ ಮನೆಗೆ ಹೋಗಿ.
ಇವತ್ತಾದ್ರೂ ನೆಮ್ಮದಿಯಿಂದ ಇರೋಣ ಅಂತ ಮೊಬೈಲ್, ಲಾಪ್ಟಾಪ್ ಆಫ್ ಮಾಡಿ ಇಷ್ಟದ ಪುಸ್ತಕ ಹಿಡಿದು ಕುಳಿತೆ. ಓದುತ್ತಾ ಕುಳಿತರೆ ಪ್ರಪಂಚ ಮುಳುಗಿದರೂ ಪರಿವೆಯೇ ಇರಲ್ಲ ನಂಗೆ. ಆದ್ರೆ ಆ ದಿನ ನಾನು ಇದ್ದದ್ದು ತಪ್ಪಾಯ್ತು ಅನ್ಸುತ್ತೆ. ಆದ ದುರಂತದ ಪರಿವೆಯೇ ಇರಲಿಲ್ಲ ನನಗೆ.
ಮರುದಿನ ಕಾಲೇಜ್ಗೆ ಬಂದಾಗ ಒಂತರಾ ವಿಚಿತ್ರವಾಗಿತ್ತು ವಾತಾವರಣ.
ನನಗೂ ಯಾವುದೋ ದುಃಖದ ಅನುಭವ ಮನದೊಳಗೆ. ಜೋರಾಗಿ ಅತ್ತು ಬಿಡಬೇಕು ಅನಿಸುತ್ತಿತ್ತು. ಹೊರಗೆ ಓಡಿ ಬಂದು ಬಿಡಬೇಕೆನ್ನಿಸಿತು. ಅವಳ ನೆನಪು ತುಂಬಾನೆ ಕಾಡಿತು. ಯಾರಿಗೂ ಹೇಳದೆ ರೂಮಿಗೆ ಬಂದವಳೇ, ಬಟ್ಟೆಗಳನ್ನೆಲ್ಲಾ ಸಣ್ಣ ಬ್ಯಾಗಿಗೆ ತುರುಕಿ, ಪರ್ಸ್ ಹಿಡಿದು ಮನೆಗೆ ಹೊರಟೇಬಿಟ್ಟೆ. ಪಕ್ಕನ ಹಿಂದಿನ ದಿನ ಆಫ್ ಮಾಡಿದ ಮೊಬೈಲ್ ಆನ್ ಮಾಡಬೇಕೆಂದು ಆಗಷ್ಟೇ ಹೊಳೆಯಿತು. ಕೂಡಲೇ ಅಮ್ಮನ ಫೋನ್, “ಬಾ ಅನು, ಬೇಗ ಮನೆಗೆ ಬಾ” ಅಂತ ಹೇಳಿ ಇಟ್ಟು ಬಿಟ್ಟಳು. ದ್ವನಿ ಕಂಪಿಸುತ್ತಿತ್ತು, ಅಮ್ಮನ ಸ್ವರ ತೀರಾ ಅಸಹನೀಯವಾಗಿತ್ತು. ಇಲ್ಲಿಯವರೆಗೆ ಅಮ್ಮ ಆ ರೀತಿ ವರ್ತಿಸಿದ್ದು ತುಂಬಾ ಕಡಿಮೆ. ನನ್ನ ಮನದ ತಳಮಳಕ್ಕೂ, ಅಮ್ಮನ ದನಿಗೂ ಏನೋ ಸಾಮ್ಯತೆ. 4-5 ಗಂಟೆಗಳಲ್ಲಿ ಮನೆಯಲ್ಲಿದ್ದೆ. ಸಣ್ಣ ತೋಟದ ಮಧ್ಯ ಇರೋದು ನಮ್ಮ ಮನೆ. ಊರ ತುಂಬಾ ನೀರವ ಮೌನ. ಅಂಗಳದ ತುಂಬಾ ಜನ. ಅತ್ಯಂತ ಸಂಕಟವಾಗುತ್ತಿತ್ತು ಮನದೊಳಗೆ. ಜನರ ಮದ್ಯೆ ದಾರಿ ಮಾಡಿಕೊಂಡು ಮನೆ ಬಾಗಿಲ ಬಳಿ ಬಂದೆ. ಅಲ್ಲಿ ನೋಡಿದರೆ, “ಅಯ್ಯೋ ನನ್ನ ವಿದೂ, ಏನಾಗಿದೆ ನನ್ನ ವಿದೂ”. ನನ್ನ ಪ್ರೀತಿಯ ವಿದು ಕಣ್ಣು ಮುಚ್ಚಿ ಶ್ವೇತ ವಸ್ತ್ರದಡಿ ಮಲಗಿದ್ದಳು.
ಅವಳು ನನ್ನ ಪ್ರೀತಿಯ ತಂಗಿ ವಿದುಷಿ. ನನ್ನ ಜೀವನದ ಅತ್ಯಂತ ವಿಶೇಷವಾದ ದೇವರ ಸೃಷ್ಟಿ ಆಕೆ.ಯಾವುದೇ ವಿಷಯವಾದರೂ ಆಕೆಗೆ ನನ್ನ ಮೊದಲ ಅರ್ಪಣೆ.ಆಕೆ ನನ್ನ ಗೆಳತಿ, ಶಿಕ್ಷಕಿ, ತಂಗಿ, ಆದರ್ಶ, ಎಲ್ಲವೂ ಆಕೆಯೇ. ಈಗ ಮನಸ್ಸಿಗಾದ ಆಘಾತ ಅಷ್ಟಿಷ್ಟಲ್ಲ. ಏನಾಗಿದೆ.. ಏನಾಗಿ ಹೋಯಿತು… ನನ್ನ ನಿರೀಕ್ಷೆಗಳ ಅನಂತ ಕಡಲು ಬತ್ತಿ ಕೈಲಾಗದೆ ಮಲಗಿದೆ. ಆಸೆಗಳ ಪ್ರಪಂಚವೇ ಇಲ್ಲ ಈಗ. ಇನ್ನೇನನ್ನು ನಿರೀಕ್ಷಿಸಲಿ ಅನೂ..ನಾನು..ಆ ಗುರಿಗಳಿರುವ ಬೆಳಕಿನ ದೊಡ್ಡ ದ್ವಾರವೇ ಮುರಿದು ಬಿದ್ದಂತೆ ಭಾಸವಾಗುತ್ತಿದೆ. ಸುತ್ತಲೂ ಕಪ್ಪಿಟ್ಟಿತು ..ಏನೂ ಕಾಣದಾಯಿತು. ನಾನು ಭೂಮಿಗಂಟಿದ್ದೆ. ಸೋತು ಹೋಗಿದ್ದೆ ನಾನು.
ಎಚ್ಚರವಾಯಿತು. ಆಸ್ಪತ್ರೆಯ ಸೂರಿನ ಕೆಳಗಿದ್ದೆ ನಾನು. ಎಲ್ಲಾ ಮುಗಿದಂತೆ ಭಾಸ. ಏಕೆಂದರೆ ನನ್ನ ಜತೆಯಾಗಿಯೇ ಹುಟ್ಟಿದ ನನ್ನ ಪ್ರತಿರೂಪದ ಜೀವವೇ ಎದುರಿಗಿಲ್ಲ. ಅವಳೇ ನನ್ನ ಜೀವನವಾಗಿದ್ದಳು. ನಾನು ಜೀವನವನ್ನು ಸಂಪೂರ್ಣವಾಗಿ ಅರ್ಥೈಸಿದ್ದೆ. ಏನೂ ಇಲ್ಲ ಅಲ್ಲಿ. ಕೇವಲ ನಿರೀಕ್ಷೆ-ಪ್ರಯತ್ನ , ಆಸೆ-ಪ್ರಯತ್ನ, ಒಮ್ಮೆ ಸಫಲ ಮತ್ತೊಮ್ಮೆ ವಿಫಲ, ನಿರಾಸೆ. ಹೌದು ಇಷ್ಟೇ ಜೀವನ ಅರ್ಥವಾಗಿದೆ ನನಗೆ. ಆದರೆ ಅದೇ ನಿಜ, ಅದೇ ವಾಸ್ತವವಾಗಿ ಎದುರಿಸಲು ಸಿಕ್ಕಿದಾಗ ಸಹಿಸಲು ಮನೋಬಲವೇ ಇಲ್ಲ ಮನುಷ್ಯನಿಗೆ.
ವಿದುಷಿ..ನನ್ನ ಜತೆಗೇ ಹುಟ್ಟಿದ ನನ್ನ ಅವಳಿ ತಂಗಿ. ಹುಟ್ಟುತ್ತಲೇ ಎರಡೂ ಕಾಲುಗಳನ್ನು ಕಳೆದುಕೊಂಡು ಹೃದಯ ಮನದ ತುಂಬಾ ಪಾಂಡಿತ್ಯ, ವಾಸ್ತವ, ಭವಿಷ್ಯದೆಡೆ ನೋಟ, ಧೈರ್ಯ, ಶ್ರೇಷ್ಠತನ ತುಂಬಿಕೊಂಡ ಸರ್ವಜ್ಞೆ ಆಕೆ. ಅದಕ್ಕೆಯೇ ಆಕೆಯ ಹೆಸರೇ ವಿದುಷಿ. ಭಾವಗಳಲ್ಲಿ ನನಗೂ ಆಕೆಗೂ ಅನಂತವಾದ ಸಾಮ್ಯತೆ. ಅದಕ್ಕೆ ನನಗೆ ಅವಳೇ ನಾನೆಂಬ ಪರಿಭಾವನೆ. ಅವಳಿಟ್ಟ ಗೆರೆ ದಾಟಲಿಲ್ಲ ನಾನು. ಅವಳೇ ನನಗೆ ಎಲ್ಲಾ. ಅವಳ ಮಾತೆಂಬ ವೇದವಾಕ್ಯಕ್ಕೆ ಬೆಲೆ ಕೊಟ್ಟು ಅವಳಿಂದಲೂ ದೂರವಿದ್ದು ಉನ್ನತ ವ್ಯಾಸಂಗಕ್ಕೆ ಪರವೂರಿಗೆ ಬಂದೆ. ಅವಳ ಸೇವೆ ಒಂದೇ ನನ್ನ ಜೀವನದ ಪರಮೋಚ್ಛ ಗುರಿಯಾಗಿತ್ತು.
ಆಕೆಗೆಲ್ಲಾ ತಿಳಿದಿತ್ತು. ಆಕೆಯ ಸಾವು ಕೂಡ. ಅವಳು ಮನುಷ್ಯಳೇ ಅಲ್ಲವೇನೋ ಎಂಬ ಭಾವ ನನಗೆ.
ಆದರೆ ಆಕೆ ಎದುರು ಬಂದಾಗ ನಾನೇನು ಎಂಬುದು ಆಕೆಗೂ ,ಅವಳೇನು ದೇವರ ಉನ್ನತ ಸೃಷ್ಟಿ ಎಂಬ ಭಾವ ನನಗೆ ಸಾಮಾನ್ಯವಾಗಿತ್ತು. ನಾನು ಮನುಷ್ಯಳೇ, ಆದರೆ ಆಕೆ ಆ ಸೃಷ್ಟಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಳು. ನನ್ನೆಲ್ಲಾ ಅಭ್ಯಾಸಗಳಿಗೂ, ಭಾವನೆಗಳಿಗೂ ಅವಳೇ ಮೂಲ ಕಾರಣ. ನಾನಿಷ್ಟು ಎತ್ತರದಲ್ಲಿ ಇರುವುದೂ ಆಕೆಯದೇ ನಿರೀಕ್ಷೆಯಿಂದ. ಹೌದು ಹುಟ್ಟುಹಬ್ಬದಂದು ಆಕೆ ಹೇಳಿದ್ದು ವಾಸ್ತವವನ್ನು ಒಪ್ಪಿ ಗೌರವಿಸಲೇ ಬೇಕೆಂದು. ಆದರೆ ಆ ವಾಸ್ತವ ಆಕೆಯ ಸಾವು ಎಂಬುದು ಆ ಗಿಜಿಗುಟ್ಟುವ ಜನರ ಮಧ್ಯೆ ಇದ್ದಾಗಲೇ ನನಗೆ ಅರಿವಾದುದು. ಆದರೆ ಅಂಥಹ ಕಠೋರ ವಾಸ್ತವವನ್ನು ಒಪ್ಪಿ ಗೌರವಿಸುವಷ್ಟು ಮನೋಧಾರ್ಡ್ಯತೆ ಹೊಂದಲು ಆ ಒಂದೇ ವಿಚಾರದಲ್ಲಿ ಈ ಹುಲುಜೀವ ಅನುಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆ ವಿದುಷಿ ಎಂಬ ಆತ್ಮ ನನ್ನದಲ್ಲವಲ್ಲ.. ಹೌದು ಈಗ ಅರಿವಾಗುತ್ತಿದೆ ನನಗೆ. ನಾನೇ ಬೇರೆ ವಿದುಷಿಯೇ ಬೇರೆ. ವಿಕಲಚೇತನೆ ವಿದುಷಿಯ ಜೊತೆ ನಿಮಿತ್ತ ಮಾತ್ರವಾಗಿ ಹುಟ್ಟಿದ ನಾನು ಇಂದು ವಾಸ್ತವವನ್ನು ಅರಿಯುತ್ತಿದ್ದೇನೆ. ವಿದೂ ನಿನ್ನ ಮಾತು ನಿಜ. ನಿರೀಕ್ಷೆಗಳಲ್ಲೇ ನಮ್ಮ ಜೀವನ.. ಈಡೇರಿಸಲು ಪ್ರಯತ್ನಿಸಬೇಕು. ಆದರೆ ವಾಸ್ತವವನ್ನು ಒಪ್ಪಿ ಗೌರವಿಸಬೇಕು. ಇದೇ ಕಟು ವಾಸ್ತವ. ನಾನು ಒಪ್ಪಿದೆ. “ಹಾ..! ಇರುವುದೆಲ್ಲವ ಬಿಟ್ಟು ಇಲ್ಲಿ ಇರದಿಹ ,ನೀನು ಎಂಬ, ನನ್ನ ವಿದುಷಿ ಎಂಬ ಪ್ರಾಣ ಇರುವೆಡೆಗೆ ನನ್ನ ಪಯಣ. ಏಕೆಂದರೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಹುಲುಮಾನವಳೇ ನಾನು. ಅದಕ್ಕೆ ವಾಸ್ತವವನ್ನು ಒಪ್ಪಿ ನನ್ನ ಪ್ರತಿರೂಪದೆಡೆ ನನ್ನ ಪಯಣ.

Advertisements

ಜನ್ಮಾಷ್ಟಮಿಯಂದು ನನ್ನ ಕೃಷ್ಣನಿಗೊಂದು ಪತ್ರ

   ಇದು ನನಗೆ ತಿಳಿದೇ ಇತ್ತು ಕೃಷ್ಣ..ನಿನಗೆ ನಾನು ಹತ್ತರಲ್ಲೊಬ್ಬಳು. ಅಂದ ಚಂದದ ಗೋಪಿಕೆಯರ ಜತೆ ನಾನೂ ಒಬ್ಬಳಾ..? ಇಲ್ಲ ..ಬೇಡ ಕೃಷ್ಣ. ನಾನು ನಿನ್ನ ಪಾಲಿಗೆ ಏಕಮಾತ್ರಳಾಗ ಬಯಸುತ್ತೇನೆ. ಕೃಷ್ಣ ಎಂಬ ಹೆಸರೇ ನನಗೆ ಮೈನವಿರೇಳಿಸುತ್ತದೆ. ಇನ್ನು ನೀನು ನನ್ನೆದುರು ಬಂದಾಗ ನನ್ನ ಹೃದಯ ಅದಕ್ಕೆ ಜೀವ ಇದೆ ಎಂದೇ ಮರೆತು ಬಿಡುತ್ತದೆ. ನಾನೊಂದು ಕ್ಷಣ ಸ್ಥಬ್ದಳಾಗಿ ಬಿಡುವೆ. ನಿನ್ನ ಮೇಲಿನ ನನ್ನ ಪ್ರೀತಿಗೆ ಮಿತಿ ಇಲ್ಲ ಕೃಷ್ಣ. ನಮಗೆ ಬೇಕಾದುದನ್ನು ಜನ ದೇವರಲ್ಲಿ ಬೇಡುತ್ತಾರೆ. ಅದರೆ ನನಗೆ ದೇವರೇ ಬೇಕು.😍 ಏನು ಮಾಡಲಿ..ಕೃಷ್ಣಾ…ನಿನ್ನ ನಗು, ನಿನ್ನ ಪ್ರೀತಿ, ನಿನ್ನ ರೀತಿ,ನಿನ್ನ ಕೋಪ, ನಿನ್ನ ಹೆಗಲು,ನಿನ್ನೆದೆ,ನಿನ್ನ ಕೇಶ,ನಿನ್ನ ಕಂಗಳು, ನಿನ್ನ ನೋಟ, ನಿನ್ನ ಪಾದ, ನಿನ್ನ ಸ್ಪರ್ಶ, ಕೊನೆಗೆ ಸಂಪೂರ್ಣವಾಗಿ ನೀನು..ನನಗೆ ಬೇಕು..ಕೃಷ್ಣಾ..
ನಿನ್ನನ್ನುಅಗಾಧವಾಗಿ ಪ್ರೇಮಿಸಿದ ರಾಧೆ,ರುಕ್ಮಿಣಿಯೋ ನಾನಾಗಲಾರೆ. ಅವರಿಗೆ ಸಮಗಟ್ಟುವನೋ ಗೊತ್ತಿಲ್ಲ. ಅದರೆ ಕೃಷ್ಣ , ನನ್ನ ಪ್ರೀತಿ ಅಳತೆಗೆ ಮೀರಿದುದು. ಅತಿಶ್ರೇಷ್ಟವಿರದಿರಬಹುದು. ಅದರೆ ಅದು ನಿಶ್ಕಲ್ಮಷ. ನನ್ನ ಈ ಒಂದು ಜನ್ಮದಲ್ಲಾದರೂ ನೀನು ನನಗೆ ಒಲಿಯಲಾರೆಯಾ..?
ಕೃಷ್ಣ ಹೇಗೆಯೇ ಇರಲಿ ಆತ ಎಲ್ಲರಿಗೂ ಕೃಷ್ಣನೇ. ಪ್ರೀತಿಗೆ ಪರ್ಯಾಯ ನೀನು. ಕೃಷ್ಣನಿದ್ದಲ್ಲಿ ಪ್ರೀತಿ ಸರ್ವಕಾಲಿಕ ಸತ್ಯ. ಪ್ರೀತಿಯ ಮಹಾಪೂರ ನೀನು. ಬಂದೊಮ್ಮೆ ನನ್ನ ಸಂತೃಪ್ತಿಗೊಳಿಸು.

ಮೌನದ ಮುದ

ಮರೆಯಲ್ಲಿ ಮೆರೆದಿದೆ ಮೌನದ ಮಾರ್ಧನ
ಮನವೇಕೋ ಮರೆತಿದೆ ಮಾತಿನ ಮಂಥನ
ಮೌನದ ಮುದಕೆ ಮಾತೇ ಮೈ ಮರೆತಿದೆ
ಮನದಲ್ಲೇ ಮಲಗಿದೆ ಮಾತೆಂಬ ಮಲ್ಲಿಗೆ

ಮೌನದ ಮಾಧುರ್ಯದಿ ಮರುಕವು ಮರೆತಿದೆ
ಮೀರಿದ ಮುದದಲ್ಲಿ ಮನ ಮಿಂದೆದ್ದಿದೆ
ಮಿಥ್ಯದ ಮೇಲಾಟ ಮೆಲ್ಲಗೆ ಮಾಸಿದೆ
ಮಾಟದ ಮಾಯವು ಮಸಣಕೆ ಮರಳಿದೆ

ಮೋಡದ ಮರೆಯಲಿ ಮೆಲ್ಲನೆ ಮಿಂಚಿದೆ
ಮೇಘದ ಮನದಲು ಮೌನವೇ ಮೆರೆದಿದೆ
ಮನಸಿನ ಮುಡಿಗೆ ಮಕರಂದದ ಮಂದಾರ
ಮುದದಲಿ ಮೇಲೆದ್ದಿದೆ ಮೌನದ ಮಂದಿರ

📝ಸ್ಮಿತಾಮಾಧವಿ

ದೇವಪುಷ್ಪ

ಆಕೆ ಕಾಯುತ್ತಿದ್ದಳು. ಮನೆಯ ಸುತ್ತ ಆಕೆ ನೆಟ್ಟಿದ್ದ ಸುಗಂಧದ ಮಲ್ಲಿಗೆ ಗಿಡಗಳು ನಗುತ್ತಿದ್ದವು. ಅವೆಲ್ಲಕ್ಕೂ ಅಂದು ಆಕೆ ಹೇಳಿದ ಅವನ ಗುಣಗಾನವೇ ಸುಗಂಧದ ಮೂಲವಾಗಿತ್ತು. ಪ್ರತೀ ಗಿಡವೂ, ಅಲ್ಲಿನ ಮಣ್ಣೂ, ಅಷ್ಟೇ ಏಕೆ ಮನೆಯ ಮೂಲೆ ಮೂಲೆಯೂ ಇಂದು ಘಮಘಮ ಸುಗಂಧವನ್ನೀಯುತ್ತಿದ್ದವು. ಬಹುಶ ಆಕೆ ಆ ಸುಗಂಧದಲ್ಲೇ ಜೀವಿಸಿರಬೇಕೇನೋ..ಆಕೆ ಹೂಗಳನ್ನಿರಿಸಿ ಕಾದಳು. ಅವನಲ್ಲೇ ದೇವರ ಕಂಡಾಕೆಯ ಪವಿತ್ರ ಭಾವಕ್ಕೆ ಆತ ಅರ್ಹನಲ್ಲವೇನೋ..ದಿನಗಳು ಕಳೆದಂತೆ ಭಾವವು ಹೂಗಳ ಸುಗಂಧದ ಜತೆ ಸೇರಿ ಮತ್ತೊಂದು ದೇವಪುಷ್ಪವಾಗುತ್ತಿತ್ತು..ಈಗ ಮನೆ (ಮನ)ಯ ತುಂಬಾ ದೇವಪುಷ್ಪಗಳೇ ತುಂಬಿ ಹೋಗಿವೆ..ಆಕೆ ಪುಷ್ಪಗಳ ಮೇಲೆ ಪವಡಿಸಿರುವಳೋ ಅಥವಾ ಮೌನಿಯಾಗಿ ಪವಡಿಸಿರುವ ಆಕೆಯ ತುಂಬಾ ಪುಷ್ಪಗಳು ಆವಸಿರುವವೋ..ಗೊತ್ತಿಲ್ಲ..ಏಕೆಂದರೆ ಆಕೆ ಸುಪ್ತವಾಗಿದ್ದಳು..ಭಾವನೆಗಳು ಮಾತ್ರ ಜೀವಂತವಾಗಿ ಹೂಗಳ ಸುಗಂಧವನ್ನು ಘಮಿಸುತ್ತಿದ್ದವು.

ಕಾಂಚಾಣ

(“ಚುನಾವಣೆಯಲ್ಲಿ ಹಣದ ಅಧಿಕಾರ”ಎಂಬ ವಿಷಯಕ್ಕೆ ಸ್ಪರ್ಧೆಯೊಂದರಲ್ಲಿ ನಾ ಬರೆದ ಕವನ)

ಮಾಟದ ನಗುವೊಂದು ನಲಿದಿತ್ತು ಜನರೆದುರು
ಹರಿಸಿತ್ತು ಆಸೆಯ ಕಾಂಚಾಣ ಕಣ್ಣೆದುರು
ನಿಶೆಯೊಳಗೆ ಕಂಡಿತ್ತು ಮದವೇರಿದ ಸ್ವರದಲ್ಲಿ
ಅಂಜಿಲ್ಲ ಅಳುಕಿಲ್ಲ ಕರುಳಿಲ್ಲ ಕರುಣಿಲ್ಲ

ಹರಿದ ಸೂರಿನ ಕೆಳಗೆ ಕಾದಿದ್ದ ಚಾತಕ
ಬಾಚಿತ್ತು ಆಸೆಯ ಕಾಂಚಾಣವ ಸ್ವಂತಕ್ಕ
ಮಾರಿತ್ತು ಪ್ರತಿಯಾಗಿ ಮತವೆಂಬ ಹಕ್ಕು
ಮಾಟದ ನಲಿದಾಟ ಅರಿತಿಲ್ಲ ತಿಳಿದಿಲ್ಲ

ಸಂತೆಯ ತೆರದಿ ಮತದ ಕೊಡು ಕೊಳ್ಳಾಟ
ಕುರುಡುಲೋಭಿಯ ನಂಬಿ ಒಪ್ಪುವ ಪರಿಪಾಠ
ಹಣಮತದಾಸೆ ತಾನೆ ಪ್ರಭು ಎಂಬೊತ್ತಾಸೆ
ಅಧಿಕಾರದಮಲಿನಲಿ ಹುಚ್ಚೆದ್ದು ಕುಣಿದಾ ಪುಂಡ

ಭರವಸೆಯ ಬೆಳಕಲ್ಲಿ ಸುಡುಗಾಡು ಸೇರಿತ್ತು
ಹಗರಣದ ಧೂಳೆಲ್ಲಾ ಕೂಳಿನಲಿ ಸೇರಿತ್ತು
ಕಾಂಚಾಣದಧಿಕಾರದ ತುಳಿತಕ್ಕೆ ಪ್ರಾಣ ನಲುಗಿತ್ತು
ಅಭಿರಾಮನಾಗಮನಕೆ ಕಂಗಳು ಕಾದಿತ್ತು..

ಇಲ್ಲೆರಡು ವಿಪರ್ಯಾಸ…

ಹೂಗಳ ರಾಶಿಯಿತ್ತು ಅಲ್ಲಿ
ಜನ ಸಮೂಹವೂ ಇತ್ತು ಅಲ್ಲೇ
ಒಂದೊಮ್ಮೆ ನಗಬಹುದು, ಅಳಬಹುದು
ಅವನು ಗೆದ್ದರೂ , ಸತ್ತರೂ
ಅದೇ ಹೂವು , ಅದೇ ಜನ

ರೇವತಿ ರಾಗದಲ್ಲೊಂದು ಗೀತೆ
ಪ್ರೇಮ ಗೀತೆ, ಭಕ್ತಿ ಗೀತೆ
ಒಬ್ಬ ಪ್ರೇಮಪರವಶನಾದ
ಒಬ್ಬ ಭಕ್ತಿಪರವಶನಾದ
ನಷ್ಟ ಸುಖವ ಎಲ್ಲವ ರಾಗವೇ ಭರಿಸಿತು

ಅಂತಿಮ ಗುರಿ

ಒಬ್ಬ  ,ತಾನು ವಿರಾಗಿಯೆಂದು ಹೇಳಿಕೊಂಡು ದೊಡ್ಡ ಆಶ್ರಮ ಕಟ್ಟಿಸಿ ನೂರಾರು ಭಕ್ತರನ್ನಾದರಿಸಿ ಅವರನ್ನು ಸಂತುಷ್ಟಿಗೊಳಿಸಿ ತಾನು ಸುಖಿಯಾದ.
ಇನ್ನೊಬ್ಬ ಶ್ರೀಮಂತ ಆಸ್ಪತ್ರೆ ಕಟ್ಟಿಸಿ ರೋಗಿಗಳನ್ನು ಗುಣಪಡಿಸಿ ಅವನೂ ಸುಖಿಯಾದ.
ಮತ್ತೊಬ್ಬ ಅದೇ ಆಶ್ರಮ, ಆಸ್ಪತ್ರೆಗಳಿಗೆ ಬಾಂಬ್ ಇರಿಸಿ ಅವೇ ಜನರನ್ನು ಕೊಂದು ಹಣ ಪಡೆದು ಅದರಿಂದ ಸುಖಿಯಾದ.
ಇನ್ನೊಬ್ಬ ಇವೆಲ್ಲವನ್ನು ಟಿ.ವಿ ಪತ್ರಿಕೆಗಳಲ್ಲಿ, ವಿವರಿಸಿ ಜನಪ್ರಿಯನಾಗಿ ಸುಖಿಯಾದ.
ಈಗ ನಾನು ಇಷ್ಟೆಲ್ಲವ ನೋಡಿ ಬರೆದು ಬಿತ್ತರಿಸಿ ಸುಖಿಯಾದೆ.
ನೂರಾರು ಆಸೆ, ನೂರಾರು ದಾರಿ, ಗುರಿ, ಈಡೇರಿಕೆ; ಆದರೆ ಅಂತಿಮ ಗುರಿ ಎಲ್ಲರದೂ ಒಂದೇ….